ಮಾನಸ ಚಿಕಿತ್ಸೆ
ಔಷಧೋಪಚಾರ, ಶಸ್ತ್ರಚಿಕಿತ್ಸೆ, ವಿದ್ಯುದಾಘಾತ ಚಿಕಿತ್ಸೆ ಇವು ಯಾವನ್ನೂ ಮಾಡದೆ ಕೇವಲ ಮನೋವೈಜ್ಞಾನಿಕ ವಿಧಾನಗಳಿಂದ ಮನೋರೋಗಗಳಿಗೆ ಚಿಕಿತ್ಸೆ ಮಾಡುವುದು (ಸೈಕೊತೆರಪಿ). ಮಾನಸ ಚಿಕಿತ್ಸೆಯ ಪ್ರಧಾನ ಉದ್ದೇಶಗಳು ಇಂತಿವೆ: 1. ಅಪಸಮಾಯೋಜಿತ ವರ್ತನ ವಿನ್ಯಾಸವನ್ನು ಬದಲಿಸುವುದು 2. ಅಂಥ ವರ್ತನ ವಿನ್ಯಾಸಗಳನ್ನು ಪೋಷಿಸುತ್ತಿರುವ ವ್ಯಕ್ತ್ಯಾಂತರ್ಗತವಾದ ಮತ್ತು ಬಾಹ್ಯ ಪರಿಸರದಲ್ಲಿರುವ ಕಾರಣಗಳನ್ನು ಪತ್ತೆ ಹಚ್ಚಿ ನಿವಾರಿಸುವುದು ಅಥವಾ ಕಡಿಮೆ ಮಾಡುವುದು. 3. ಉತ್ತಮ ಅಂತರವ್ಯಕ್ತಿ ಬಾಂಧವ್ಯಗಳನ್ನು ಬೆಳೆಸಿಕೊಳ್ಳುವ ಸಾಮಥ್ರ್ಯ ಅಭಿವೃದ್ಧಿಗೊಳಿಸುವುದು. 4. ವ್ಯಕ್ತಿಯ ಮನಸ್ಸಿನಾಳದಲ್ಲಿ ಹುದುಗಿ ಅವನ ಶಕ್ತಿ ಕುಂದಿಸುತ್ತಿರುವ ಉಭಯ ಸಂಕಟಗಳನ್ನು (ಕಾನ್‍ಫ್ಲಿಕ್ಟ್ಸ್) ಪತ್ತೆ ಹಚ್ಚಿ ಬಗೆಹರಿಸಿ ಅವನ ಬೇಗುದಿಯನ್ನು ಕಡಿಮೆ ಮಾಡುವುದು. 5. ವ್ಯಕ್ತಿ ತನ್ನ ಬಗ್ಗೆ ಮತ್ತು ಬಾಹ್ಯ ಜಗತ್ತಿನ ಬಗ್ಗೆ ಹೊಂದಿರಬಹುದಾದ ತಪ್ಪು ಪರಿಕಲ್ಪನೆಗಳನ್ನು ಸರಿಪಡಿಸುವುದು. 6. ವ್ಯಕ್ತಿಯ ಒಳಗಣ್ಣನ್ನು ಅರಳಿಸಿ ಆತ ತನ್ನ ಆಂತರಿಕ ಮತ್ತು ಬಾಹ್ಯ ಜಗತ್ತಿನೊಡನೆ ಸಾಮರಸ್ಯ ಉಂಟುಮಾಡಿಕೊಳ್ಳಲು ಸಹಾಯ ಮಾಡುವುದು. 7. ವಸ್ತುನಿಷ್ಠ ಅಹಂಪರಿಕಲ್ಪನೆ ಹೊಂದುವುದರ ಮೂಲಕ ಅರ್ಥಪೂರ್ಣ, ಸಾರ್ಥಕ ಜೀವನ ನಡೆಸಲು ಸಹಾಯ ಮಾಡುವುದು.

ಮಾನಸ ಚಿಕಿತ್ಸೆಯಿಂದ ನ್ಯೂರಾಸಿಸ್ ವರ್ಗಕ್ಕೆ ಸೇರಿದ ಲಘು ಮನೋರೋಗಗಳಿಗೆ ಚಿಕಿತ್ಸೆ ನೀಡಬಹುದು. ಸೈಕಾಸಿಸ್ ವರ್ಗಕ್ಕೆ ಸೇರಿದ ತೀರ ಮನೋರೋಗಗಳನ್ನು ಕೂಡ ಯುಕ್ತ ಔಷಧೋಪಚಾರದೊಂದಿಗೆ ಮಾನಸ ಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸುವ ಸಾಧ್ಯತೆ ಇದೆ.

ಮಾನಸ ಚಿಕಿತ್ಸೆಯ ಯಶಸ್ಸು ಏನನ್ನು ಅವಲಂಬಿಸಿದೆ ಎಂಬುದರ ಬಗ್ಗೆ ಎರಡು ವಿಚಾರಧಾರೆಗಳಿವೆ: ಮನಸ್ಸಿನ ಅಜಾಗೃತ ಭಾಗದಲ್ಲಿ ಹುದುಗಿರುವ ಪ್ರೇರಕಗಳು ಮತ್ತು ಉಭಯ ಸಂಕಟಗಳನ್ನು ವ್ಯಕ್ತಿ `ಎಷ್ಟರಮಟ್ಟಿಗೆ ಅರಿತು ಅರ್ಥಮಾಡಿಕೊಳ್ಳುತ್ತಾನೆ ಎಂಬುದು ಒಂದು ವಿಚಾರಧಾರೆಯಾದರೆ, ಅಪಸಮಾಯೋಜಿತ ವರ್ತನೆಯ ಬೆಳೆವಣಿಗೆಯ ಮೂಲ ಶೋಧಿಸದೆ ಸಮಸ್ಯೆಗಳನ್ನು ನಿಭಾಯಿಸಲು ವ್ಯಕ್ತಿ ಕಲಿಯಲು ಸಾಧ್ಯ ಎಂಬುದು ಇನ್ನೊಂದು. ಆದ್ದರಿಂದ ಮಾನಸ ಚಿಕಿತ್ಸೆಯ ಯಶಸ್ಸು ವ್ಯಕ್ತಿ ಅನುಸರಿಸುವ ಕಲಿಕೆಯ ವಿಧಾನವನ್ನು ಅವಲಂಬಿಸಿದೆ ಎಂದಾಯಿತು. ಈ ವಿಚಾರಧಾರೆಗಳಿಂದ ಅನೇಕ ಚಿಕಿತ್ಸಾ ತಂತ್ರಗಳು ಮೂಡಿ ಬಂದಿವೆ. ಮಾನಸ ಚಿಕಿತ್ಸೆಯ ವಿವಿಧ ತಂತ್ರಗಳಲ್ಲಿ ಈ ಮುಂದಿನ ಸಾಮಾನ್ಯ ಲಕ್ಷಣಗಳಿವೆ: 1. ಮಾನಸ ಚಿಕಿತ್ಸಕ ಮತ್ತು ಮನೋರೋಗಿಯ ನಡುವೆ ವಿಶಿಷ್ಟ ಸಂವಹನ (ಕಮ್ಯೂನಿಕೇಶನ್); 2. ಮನೋರೋಗಿ ತನ್ನ ಅಂತರಂಗದಲ್ಲಿ ಅತಿ ಗುಪ್ತವಾಗಿ ಇಟ್ಟುಕೊಂಡಿರುವ ಭಯಗಳು, ಸಂವೇಗಗಳು ಮತ್ತು ಅನುಭವಗಳನ್ನು ನಿರ್ಭೀತಿಯಿಂದ ವ್ಯಕ್ತಗೊಳಿಸಲು ಪ್ರೋತ್ಸಾಹಿಸುವುದು; 3. ಚಿಕಿತ್ಸಕ ರೋಗಿಗೆ ಅನುಕಂಪ ತೋರುತ್ತಿದ್ದರೂ ಕೂಡ, ತನ್ನ ಸಂವೇಗಾತ್ಮಕ ಸಮತೋಲ ಕಾಯ್ದುಕೊಂಡು ರೋಗಿಯ ಸಮಸ್ಯೆಯನ್ನು ಸ್ಪಷ್ಟವಾಗಿ ಮತ್ತು ವಸ್ತುನಿಷ್ಠವಾಗಿ ವಿಶ್ಲೇಷಿಸಲು ಅಗತ್ಯವಾದ ಸಮಚಿತ್ತತೆ ಹೊಂದಿರುವುದು.
ಮಾನಸ ಚಿಕಿತ್ಸೆಯ ಪ್ರಚಲಿತ ತಂತ್ರಗಳನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸಬಹುದು. ವರ್ಗೀಕರಿಸಲು ಉಪಯೋಗಿಸಬಹುದಾದ ಪ್ರಧಾನ ಆಯಾಮಗಳು ಇವು:
 1. ವೈಯಕ್ತಿಕ ಸಮೂಹ, ವೈಯಕ್ತಿಕ ಚಿಕಿತ್ಸೆಯಲ್ಲಿ ಚಿಕಿತ್ಸಕ ಒಮ್ಮೆ ಒಬ್ಬ ರೋಗಿಗೆ ಮಾತ್ರ ಚಿಕಿತ್ಸೆ ನೀಡುತ್ತಾನೆ. ಈ ಚಿಕಿತ್ಸೆಯ ಯಶಸ್ಸು ಬಲುಮಟ್ಟಿಗೆ ರೋಗಿ ಚಿಕಿತ್ಸಕ ಇವರಿಬ್ಬರ ನಡುವಿನ ಬಾಂಧವ್ಯದ ಸಮರ್ಪಕತೆಯನ್ನು ಅವಲಂಬಿಸಿರುತ್ತದೆ. ಸಮೂಹಚಿಕಿತ್ಸೆಯಲ್ಲಿ ಚಿಕಿತ್ಸಕ ಅನೇಕ ರೋಗಿಗಳಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುತ್ತಾನೆ. ಸಮೂಹದ ಸದಸ್ಯರ ನಡುವೆ ನಡೆಯುವ ಅನ್ಯೋನ್ಯಕ್ರಿಯೆ ಚಿಕಿತ್ಸೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. 2. ಅರಿವಿನಲ್ಲಿ ಬದಲಾವಣೆ/ವರ್ತನೆಯಲ್ಲಿ ಬದಲಾವಣೆ. ಕೆಲವು ಚಿಕಿತ್ಸಾ ತಂತ್ರಗಳು ರೋಗಿಯ ಮೌಲ್ಯಗಳು ಮತ್ತು ಇತರ ಸುಸಂಗತ ತಿಳಿವಳಿಕೆಗಳನ್ನು ಬದಲಿಸಲು ಯತ್ನಿಸಿದರೆ, ಇನ್ನು ಕೆಲವು ಅವನ ವರ್ತನೆಯನ್ನು ಬದಲಿಸುವುದಕ್ಕೆ ಹೆಚ್ಚು ಒತ್ತುಕೊಡುತ್ತವೆ. 3. ನಿರ್ದೇಶಾತ್ಮಕ/ಅನಿರ್ದೇಶಾತ್ಮಕ. ನಿರ್ದೇಶಾತ್ಮಕ ಚಿಕಿತ್ಸಾ ತಂತ್ರಗಳಲ್ಲಿ ಚಿಕಿತ್ಸಕ ಪ್ರಧಾನ ಪಾತ್ರವಹಿಸುತ್ತಾನೆ, ಅನಿರ್ದೇಶಾತ್ಮಕ ಚಿಕಿತ್ಸಾ ತಂತ್ರಗಳಲ್ಲಿ ಚಿಕಿತ್ಸಕ ಪ್ರಧಾನ ಪಾತ್ರವಹಿಸುತ್ತಾನೆ. ಅನಿರ್ದೇಶಾತ್ಮಕ ಚಿಕಿತ್ಸಾ ತಂತ್ರಗಳಲ್ಲಿ ರೋಗಿ ಪ್ರಧಾನ ಪಾತ್ರವಹಿಸುವಂತೆ ಮಾಡಲಾಗುತ್ತದೆ. 4. ವರ್ತನೆಯ ಮೇಲೆ ಹತೋಟಿ. ಆಂತರಿಕ/ಬಾಹ್ಯ, ಕೆಲವು ಚಿಕಿತ್ಸಾ ತಂತ್ರಗಳು ವ್ಯಕ್ತಿಯ ವರ್ತನೆ ಸ್ವನಿಯಂತ್ರಿತ ಆಗುವಂತೆ ಮಾಡುವ ಗುರಿ ಹೊಂದಿರುತ್ತವೆ. ಕೆಲವು ಪುಷ್ಟೀಕರಣದ (ರೀ ಇನ್‍ಫೋರ್ಸ್‍ಮೆಂಟ್) ತತ್ತ್ವಗಳನ್ನು ಉಪಯೋಗಿಸಿ ವ್ಯಕ್ತಿಯ ವರ್ತನೆಯನ್ನು ಬಾಹ್ಯ ಪರಿಸರದ ಘಟಕಗಳು ನಿಯಂತ್ರಿಸುವಂತೆ ಮಾಡುವ ಗುರಿ ಹೊಂದಿರುತ್ತವೆ. 5. ವಿಷಮಸ್ಥಿತಿ ಏರ್ಪಡದಂತೆ ಅಡ್ಡಬರುವಿಕೆ (ಕ್ರೈಸಿಸ್ ಇಂಟರ್‍ವೆನ್ಷನ್)/ವೈಯಕ್ತಿಕ ಬೆಳೆವಣಿಗೆ, ವ್ಯಕ್ತಿಯನ್ನು ಕಾಡುತ್ತಿರುವ ಸಮಸ್ಯೆಗಳು ವಿಷಮಸ್ಥಿತಿ ಮುಟ್ಟದಂತೆ ಮಾಡುವುದಕ್ಕೆ ಕೆಲವು ಚಿಕಿತ್ಸಾತಂತ್ರ ಹೆಚ್ಚು ಒತ್ತು ಕೊಡುತ್ತವೆ. ಕೆಲವು ಉತ್ತಮ ಅಹಂ ಅರಿವು (ಸೆಲ್ಫ್ ಅಂಡರ್‍ಸ್ಟ್ಯಾಂಡಿಂಗ್) ಬೆಳೆಸುವುದಕ್ಕೆ ಹೆಚ್ಚು ಒತ್ತು ಕೊಡುತ್ತವೆ.

ಮಾನಸ ಚಿಕಿತ್ಸೆಯ ಪ್ರಧಾನ ತಂತ್ರಗಳ ಪಕ್ಷಿನೋಟ: 1. ಮನೋವಿಶ್ಲೇಷಣಾತ್ಮಕ ಚಿಕಿತ್ಸೆ: ಸಿಗ್ಮಂಡ್ ಫ್ರಾಯ್ಡ್ ರೂಪಿಸಿದ ಚಿಕಿತ್ಸಾ ಪದ್ಧತಿಯ ಪ್ರಕಾರ ವ್ಯಕ್ತಿಯ ಜೀವನದ ಮೊದಲ ಭಾಗದ ಮನೋಲೈಂಗಿಕ ಬೆಳೆವಣಿಗೆಯಲ್ಲಿ ಉದ್ಭವಿಸುವ ಸಮಸ್ಯೆಗಳು ಅನೈಚ್ಛಿಕ ದಮನಕ್ಕೆ (ರಿಪ್ರೆಷನ್) ಒಳಗಾದ ಸ್ಮøತಿಗಳ, ಪ್ರೇರಣೆಗಳ, ಉಭಯಸಂಕಟಗಳ ಮೂಲ. ಇವನ್ನು ಬಯಲಿಗೆಳೆದು ಪರಿಹರಿಸಲು ವ್ಯಕ್ತಿಗೆ ಸಹಾಯ ಮಾಡುವುದೇ ಚಿಕಿತ್ಸೆಯ ಪ್ರಧಾನ ಉದ್ದೇಶ. ರೋಗಿ ತನಗೆ ತೋಚಿದ್ದನ್ನು ನಿರ್ಭೀತಿಯಿಂದ ಹೇಳಲು ಪ್ರೋತ್ಸಾಹಿಸುವುದು ಅರ್ಥಾತ್ ಮುಕ್ತ ಸಾಹಚರ್ಯ (ಫ್ರೀ ಅಸೋಸಿಯೇಶನ್), ಕನಸುಗಳ ವಿಶ್ಲೇಷಣೆ, ವ್ಯಕ್ತಿಯಲ್ಲಿ ಇರುವ ಪ್ರತಿರೋಧಗಳ (ರೆಸಿಸ್ಟೆನ್ಸ್) ವಿಶ್ಲೇಷಣೆ, ರೋಗಿ, ಚಿಕಿತ್ಸಕ ಬಾಂಧವ್ಯದಲ್ಲಾಗುವ ವರ್ಗಾವಣೆಯ ವಿಶ್ಲೇಷಣೆ ಇವು ಈ ಚಿಕಿತ್ಸಾತಂತ್ರದ ವೈಶಿಷ್ಟ್ಯಗಳು. ಈ ಪಂಥಕ್ಕೆ ಸೇರಿದ ಆಧುನಿಕ ಚಿಕಿತ್ಸಕರಲ್ಲಿ ಹೆಚ್ಚಿನವರು ರೋಗಿಯ ಬಾಲ್ಯದ ಜೀವನಾನುಭವಕ್ಕಿಂತ ಹೆಚ್ಚು ಮಹತ್ತ್ವವನ್ನು ಅವನ ಈಚಿನ ಅನುಭವಗಳಿಗೆ ನೀಡುತ್ತಾರೆ. ಲೈಂಗಿಕತೆಗೆ ಫ್ರಾಯ್ಡ್ ನೀಡುವಷ್ಟು ಮಹತ್ತ್ವ ಇವರು ನೀಡುವುದಿಲ್ಲ. ಇದು ದೀರ್ಘಾವಧಿ ಚಿಕಿತ್ಸೆ, ಹೆಚ್ಚು ವೆಚ್ಚ ತಗಲುತ್ತದೆ. ಇವೇ ಮೊದಲಾದ ಕಾರಣಗಳಿಗಾಗಿ ಈ ಪಂಥದ ಚಿಕಿತ್ಸಕರು ಹೆಚ್ಚು ಮಂದಿ ಸಿಗಲಾರದು.

2. ವರ್ತನ ಚಿಕಿತ್ಸೆ (ಬಿಹೇವಿಯರ್ ತೆರಪಿ): ವಿಕೃತ ವರ್ತನೆಗಳು ಕಲಿಯಲ್ಪಟ್ಟವು (ರೋಗಗ್ರಸ್ತ ಮಿದುಳು ಇಲ್ಲದೆ ಇದ್ದಾಗ), ಇಂಥ ಕಲಿಕೆಯನ್ನು ಪರಿಸರದ ಯಾವುದೋ ಅಂಶ ಪೋಷಿಸಿ ಪುಷ್ಟೀಕರಿಸುತ್ತಿದೆ. ಜೀವನದ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಸಾಮಥ್ರ್ಯಗಳನ್ನು ವ್ಯಕ್ತಿ ಬೆಳೆಸಿಕೊಳ್ಳದೆ ಇರುವುದರ ಪರಿಣಾಮವೆ ವಿಕೃತ ವರ್ತನೆಗಳು-ಇವು ವರ್ತನ ಚಿಕಿತ್ಸಕರ ಮೂಲ ನಂಬಿಕೆಗಳು. ಈಗಾಗಲೇ ಕಲಿತಿರುವ ದೋಷಯುಕ್ತ ವರ್ತನೆಗಳನ್ನು ನಾಶಮಾಡಿ ಉತ್ತಮ ವರ್ತನ ವಿನ್ಯಾಸಗಳು ನೆಲೆನಿಲ್ಲುವಂತೆ ಮಾಡುವುದು ಈ ಚಿಕಿತ್ಸಾ ಪದ್ಧತಿಯ ಪ್ರಧಾನ ಉದ್ದೇಶ. ಸೋಪಾಧಿಕ ಕಲಿಕೆಯ ತಂತ್ರಗಳು ಮತ್ತು ಸಾಮಾಜಿಕ ಕಲಿಕೆಯ `ಅನುಕರಣೀಯ ಮಾದರಿ' ಒದಗಿಸುವ ತಂತ್ರಗಳು-ಇದನ್ನು ಉದ್ದೇಶ ಸಾಧನೆಗೆ ಬಳಸಲಾಗುತ್ತದೆ.

3. ಗಿರಾಕಿಕೇಂದ್ರಿತ ಚಿಕಿತ್ಸೆ (ಕ್ಲಯೆಂಟ್ ಸೆಂಟರ್ಡ್ ತೆರಪಿ): ಸುಸಂಘಟಿತ ಅಹಂಪರಿಕಲ್ಪನೆ ಇಲ್ಲದೆ ಇದ್ದಾಗ, ಹೊಂದಿರುವ ಅಹಂಪರಿಕಲ್ಪನೆಗೆ ಧಕ್ಕೆ ಉಂಟು ಮಾಡುವ ಅನುಭವಗಳನ್ನು ಕಡೆಗಾಣಿಸುವುದರ ಮೂಲಕ ಅಂತಸ್ಥ ಸಾಮಥ್ರ್ಯಗಳ ಪೂರ್ಣ ಪ್ರಯೋಜನ ಪಡೆಯದೆ ಇದ್ದಾಗ ಅಪಸಮಾಯೋಜನೆ ಉಂಟಾಗುತ್ತದೆ. ವ್ಯಕ್ತಿ ಪರಿಪೂರ್ಣ ಅಹಂಪರಿಕಲ್ಪನೆ ಬೆಳೆಸಿಕೊಂಡು ಪರಿಸರದೊಂದಿಗೆ ಸಾಮರಸ್ಯದಿಂದ ಬಾಳಲು ಸಹಾಯ ಮಾಡುವುದು ಈ ಪದ್ಧತಿಯ ಪ್ರಧಾನ ಉದ್ದೇಶ. ಕಾರ್ಲ್‍ರೋಜರ್ಸ್ ರೂಪಿಸಿದ ಈ ಪದ್ಧತಿ ಅನಿರ್ದೇಶಾತ್ಮಕ ಚಿಕಿತ್ಸಾತಂತ್ರಗಳನ್ನು ಬಳಸುತ್ತದೆ. 

4. ಜೆಸ್ಟಾಲ್ಟ್ ಚಿಕಿತ್ಸೆ: ಮಾನಸ ನಾಟಕಗಳ ಮೂಲಕ, ಪಾತ್ರಾಭಿನಯಗಳ ಮೂಲಕ ವ್ಯಕ್ತಿತ್ವದ ಪರಿಪೂರ್ಣ ಚಿತ್ರ ಚಿತ್ರಿಸಿ, ವ್ಯಕ್ತಿ ಅದನ್ನು ಒಪ್ಪಿಕೊಳ್ಳಲು ಪ್ರೋತ್ಸಾಹಿಸುವುದು ಈ ಪದ್ಧತಿಯ ವೈಶಿಷ್ಟ್ಯ. ಫ್ರೆಡ್ರಿಕ್ ಪಲ್ರ್ಸ್ ರೂಪಿಸಿದ ಈ ಪದ್ಧತಿ, ಸಮೂಹ ಮತ್ತು ವ್ಯಕ್ತಿ ಚಿಕಿತ್ಸೆ-ಈ ಎರಡು ಆಯಾಮಗಳನ್ನೂ ಒಳಗೊಂಡಿದೆ.

5. ವಾಸ್ತವಿಕತಾ ಚಿಕಿತ್ಸೆ (ರಿಯಾಲಿಟಿ ತೆರಪಿ): ವ್ಯಕ್ತಿ ತನ್ನ ಮೌಲ್ಯಗಳನ್ನು ಸ್ಪಷ್ಟೀಕರಿಸಿ ತನ್ನ ವರ್ತನೆಯನ್ನು ಸ್ವಮೌಲ್ಯಮಾಪನ ಮಾಡಿ, ಸಮಸ್ಯಾ ಪರಿಹಾರದ ವಿವಿಧ ವಿಧಾನಗಳನ್ನು ಅವುಗಳು ಉಂಟುಮಾಡಬಹುದಾದ ಪರಿಣಾಮಗಳ ಮುನ್ನಲೆಯಲ್ಲಿ ತುಲನೆ ಮಾಡಿ, ದತ್ತ ಸನ್ನಿವೇಶಕ್ಕೆ ಅತ್ಯಂತ ಸಮರ್ಪಕವಾದ ವಿಧಾನವನ್ನು ಆಯ್ಕೆಮಾಡಲು ಪ್ರೋತ್ಸಾಹಿಸುವುದು ಈ ಪದ್ಧತಿಯ ವೈಶಿಷ್ಟ್ಯ, ಗ್ಲಾಸ್ಸರ್ ಈ ಪದ್ಧತಿಯ ಶಿಲ್ಪಿ.

6. ತಾರ್ಕಿಕ ಭಾವೋದ್ರೇಕದ ಚಿಕಿತ್ಸೆ (ರ್ಯಾಶನಲ್ ಇಮೊಟಿವ್ ತೆರಪಿ): ಎಲ್ಲಿಸ್‍ನ ಸಂಶೋಧನೆಗಳಿಂದ ಮೂಡಿಬಂದ ಈ ಪದ್ಧತಿ ವ್ಯಕ್ತಿಯಲ್ಲಿ ಇರುವ ತರ್ಕಸಮ್ಮತವಲ್ಲದ ಅಭಿಪ್ರಾಯಗಳನ್ನು ಕಿತ್ತೊಗೆಯುವ ಗುರಿಹೊಂದಿದೆ. ಚಿಕಿತ್ಸಕ ಕೇಂದ್ರಿತವಾದ ಈ ಪದ್ಧತಿಯಲ್ಲಿ ಚಿಕಿತ್ಸಕ ರೋಗಿಯ ತೊಂದರೆಗೆ ಕಾರಣವಾದ ಅಭಿಪ್ರಾಯಗಳ ಮೇಲೆ ನೇರವಾಗಿ ದಾಳಿಮಾಡಿ, ಅವನು ವಸ್ತುಸ್ಥಿತಿಯ ತರ್ಕಸಮ್ಮತ ವಿವರಣೆಯನ್ನು ಸ್ವೀಕರಿಸಲು ಒತ್ತಾಯಿಸುತ್ತಾನೆ.

7. ಅಂತರ ವ್ಯಕ್ತಿ ಚಿಕಿತ್ಸೆ (ಇಂಟರ್‍ಪರ್ಸನಲ್ ತೆರಪಿ): ವಿವಾಹಿತರ ಚಿಕಿತ್ಸೆ (ಮ್ಯಾರಿಟಲ್ ತೆರಪಿ), ಕುಟುಂಬ ಚಿಕಿತ್ಸೆ (ಫ್ಯಾಮಿಲಿ ತೆರಪಿ)), ವ್ಯವಹಾರ ಕ್ರಮದ ವಿಶ್ಲೇಷಣೆ (ಟ್ರಾಗ್ಸ್ಯಾಕ್ಷನಲ್ ಅನಾಲಿಸಿಸ್) ಎಂಬ ಪ್ರಭೇದಗಳನ್ನು ಒಳಗೊಂಡ ಈ ಪದ್ಧತಿ ದಂಪತಿಗಳ ನಡುವಿನ, ಕುಟುಂಬದ ಸದಸ್ಯರ ಮತ್ತು ರೋಗಿಯ ನಡುವಿನ ಹೊಂದಾಣಿಕೆಯನ್ನು ಸುಧಾರಿಸುವ ಉದ್ದೇಶಹೊಂದಿದೆ.

8. ಸಮೂಹ ಚಿಕಿತ್ಸೆ ಮತ್ತು ಸಮಾಗಮ ಸಮೂಹ ಚಿಕಿತ್ಸೆ (ಗ್ರೂಪ್ ತೆರಪಿ, ಎನ್‍ಕೌಂಟರ್ ಗ್ರೂಪ್ ತೆರಪಿ): ಪ್ರತ್ಯೇಕತಾ ಮನೋಭಾವ, ಒಂಟಿತನ, ತಿರಸ್ಕøತ ಮನೋಭಾವ, ಇತರರೊಡನೆ ತೃಪ್ತಿಕರವಾಗಿ ವ್ಯವಹರಿಸಲು ಅಸಮರ್ಥತೆ, ಅರ್ಥಪೂರ್ಣ ಮೈತ್ರಿಯನ್ನು ಯಾರೊಡನೆಯೂ ಹೊಂದಲು ಆಗದೆ ಇರುವುದು ಇಂಥವುಗಳಿಂದ ಉದ್ಭವಿಸುವ ಸಂವೇಗಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ವ್ಯಕ್ತಿಯನ್ನು ಯುಕ್ತ ಸಮೂಹದಲ್ಲಿರಿಸಿ ಚರ್ಚೆ, ಮಾನಸನಾಟಕ ಇಂಥ ತಂತ್ರಗಳನ್ನು ಈ ಪದ್ಧತಿಯಲ್ಲಿ ಬಳಸಲಾಗುತ್ತದೆ.

9. ಸಾರಸಂಗ್ರಹ ಪದ್ಧತಿ ಚಿಕಿತ್ಸೆ (ಎಕ್‍ಲೆಕ್ಟಿಕ್ ತೆರಪಿ): ಸಮಸ್ಯೆಯನ್ನಾಧರಿಸಿ ಎಲ್ಲ ಪಂಥಗಳು ಸೂಚಿಸಿರುವ ತಂತ್ರಗಳಲ್ಲಿ ಒಂದನ್ನು ಅಥವಾ ಯುಕ್ತವಾದವುಗಳ ಯುಕ್ತ ಮಿಶ್ರಣವನ್ನು ಉಪಯೋಗಿಸುವಿಕೆ.
		 (ಬಿ.ಕೆ.ಎಸ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ